ನೀಟ್ಟಿ, ಫ್ರಾಂಚೇಸ್ಕೊ ಸಾವೇರ್ಯೊ
	1868-1953. ಇಟಲಿಯ ರಾಜನೀತಿಜ್ಞ. ವಾಮಪಂಥೀಯ ಉದಾರವಾದಿಯಾಗಿದ್ದ ಇವರು 1ನೆಯ ಮಹಾಯುದ್ಧದ ತರುವಾಯ ರಾಷ್ಟ್ರ ಎದುರಿಸುತ್ತಿದ್ದ ಬಿಕ್ಕಟ್ಟಿನ ಕಾಲದಲ್ಲಿ ಒಂದು ವರ್ಷ ಪ್ರಧಾನ ಮಂತ್ರಿಯಾಗಿದ್ದರು.

	ನೀಟ್ಟಿ 1868ರ ಜುಲೈ 19ರಂದು ಮೆಲ್‍ಫಿಯಲ್ಲಿ ಜನಿಸಿದರು. ಬ್ಯಾರಿಸ್ಟರ್ ಪದವಿ ಪಡೆದು ನೇಪ್‍ಲ್ಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. 1904ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಚುನಾಯಿತರಾದರು. 1911-1914ರಲ್ಲಿ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದರು. ಅನಂತರ 1917-1919ರಲ್ಲಿ ವಿತ್ತ ಮಂತ್ರಿಯಾಗಿದ್ದರು. ವಿ. ಇ. ಬರ್ಲಾಂಡೊ ನೇತೃತ್ವದ ಯುದ್ಧಕಾಲೀನ ಸಂಪುಟ ಕುಸಿದುಬಿದ್ದಾಗ 1919ರ ಜೂನ್ 19ರಂದು ನೀಟ್ಟಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಇವರು ಅನುಪಾತಿ ಪ್ರಾತಿನಿಧ್ಯ ಚುನಾವಣಾ ಪದ್ಧತಿಯನ್ನು ಜಾರಿಗೆ ತಂದರು. ತತ್ಪರಿಣಾಮವಾಗಿ 1919ರ ನವಂಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಸಮಾಜವಾದಿಗಳು ಮತ್ತು ಕ್ರೈಸ್ತ ಪ್ರಜಾಪ್ರಭುತ್ವವಾದಿಗಳು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾದರು. ಆದರೆ ಈ ವಿಭಿನ್ನ ಗುಂಪುಗಳ ನಡುವೆ ಸಮನ್ವಯವನ್ನು ಸಾಧಿಸುವಲ್ಲಿ ನೀಟ್ಟಿ ಯಶಸ್ವಿಯಾಗಲಿಲ್ಲ. ದೇಶಾದ್ಯಂತ ಮುಷ್ಕರಗಳು ಹೆಚ್ಚಿದ್ದವು. ಫ್ಯಾಸಿಸ್ಟರ ಕೋಟಲೆ ಅಧಿಕವಾಯಿತು. ಕೊನೆಗೆ 1920ರ ಜೂನ್ 9ರಂದು ನೀಟ್ಟಿ ರಾಜಿನಾಮೆ ನೀಡಿದರು. 1921ರ ಮೇನಲ್ಲಿ ನಡೆದ ಚುನಾವಣೆಯಲ್ಲಿ ಸಂಸತ್ತಿಗೆ ಇವರು ಪುನಃ ಚುನಾಯಿತರಾದರು. 1924ರ ಏಪ್ರಿಲ್‍ನಲ್ಲಿ ನಡೆದ ಚುನಾವಣೆಯಲ್ಲಿ ಇವರು ಸ್ಪರ್ಧಿಸಲಿಲ್ಲ. ಆಗ ಫ್ಯಾಸಿಸ್ಟ್ ಆಡಳಿತ ಪ್ರಾರಂಭವಾಗಿತ್ತು. ನೀಟ್ಟಿ ದೇಶತ್ಯಾಗ ಮಾಡಿದರು. ಹಲವು ವರ್ಷಗಳ ಕಾಲ ಫ್ರಾನ್ಸಿನಲ್ಲಿ ನೆಲಸಿದ್ದರು. ಎರಡನೆಯ ಮಹಾಯುದ್ಧದ ಕಾಲದಲ್ಲಿ 1943ರ ಆಗಸ್ಟ್‍ನಲ್ಲಿ ಜರ್ಮನರು ಆಸ್ಟ್ರಿಯದಲ್ಲಿ ಇವರನ್ನು ಬಂಧನದಲ್ಲಿಟ್ಟಿದ್ದರು. ಮಿತ್ರರಾಷ್ಟ್ರಗಳೂ ಜಯ ಗಳಿಸಿದಾಗ 1945ರಲ್ಲಿ ಇವರ ವಿಮೋಚನೆಯಾಯಿತು. ಸ್ವದೇಶಕ್ಕೆ ಮರಳಿದ ಮೇಲೆ 1948ರ ಜೂನಿನಲ್ಲಿ ಇವರು ಸೆನೆಟ್ ಸಭೆಯ ಸದಸ್ಯರಾದರು. ಇವರು ತೀರಿಕೊಂಡಿದ್ದು 1953ರ ಫೆಬ್ರವರಿ 20ರಂದು, ರೋಮ್ ನಗರದಲ್ಲಿ. ನೀಟ್ಟಿ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಕುರಿತು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.
(ಬಿ.ಕೆ.ಸಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ